ಕೀರ್ತನ ಕಲೆ

ಪುರಾಣಶ್ರವಣಕ್ಕಿಂತ ಹೆಚ್ಚು ಜನಪ್ರಿಯವಾಗಿರುವ ಒಂದು ಸಾಂಸ್ಕøತಿಕ ಹವ್ಯಾಸ. ಹರಿಕಥೆ, ಶಿವಕಥೆ, ಜಿನಕಥೆ-ಮೊದಲಾದ ಹೆಸರುಗಳಿಂದ ಪ್ರಸಿದ್ಧವಾಗಿದೆ. ಕಥಾಕಾಲಕ್ಷೇಪ ಎಂದು ಹೇಳುವುದೂ ಉಂಟು. ವಿಷಯ ಕಥಾಕಾಲಕ್ಷೇಪವಾದರೆ ಶ್ರೋತೃಗಳನ್ನು ಭಗವದ್‍ಭಕ್ತರೆಂದೂ ಕಥೆ ಹೇಳುವವರನ್ನು ದಾಸರು, ಭಾಗವತರೂ ಎಂದೂ ಹೇಳುವುದು ವಾಡಿಕೆ. ಭಗವನ್ನಾಮ ಸಂಕೀರ್ತನವೇ ಇಲ್ಲಿ ಪ್ರಧಾನವಾದುದರಿಂದ ಈ ಹವ್ಯಾಸವನ್ನು ಕೀರ್ತನವೆಂದೂ ಇದನ್ನು ನಿರ್ವಹಿಸುವವರನ್ನು ಕೀರ್ತನಕಾರರೆಂದೂ ಕರೆಯುತ್ತಾರೆ. ಈ ಕಲೆ ಸಾಕಷ್ಟು ಪ್ರಾಚೀನವಾದುದಾದರೂ ಇದರ ಉಗಮ, ಚರಿತ್ರೆಗಳನ್ನು ತಿಳಿಸುವ ಲಿಖಿತ ದಾಖಲೆಗಳಾವುವೂ ದೊರೆತಿಲ್ಲ. ನವವಿಧ ಭಕ್ತಿಗಳಲ್ಲಿ ಕೀರ್ತನವೂ ಒಂದೆನಿಸಿದ್ದು ಅದರ ಮೂಲಕ ದೇವರ ಸೇವೆ ಮಾಡುವ ಪದ್ಧತಿ ಬಹು ಪ್ರಾಚೀನವಾದುದಂತೂ ಹೌದು.

 ಇತಿಹಾಸದ ಪ್ರಸಿದ್ಧ ವಿಷಯಗಳನ್ನೋ ಪುರಾಣಕಾವ್ಯಾದಿಗಳ ಭಾಗಗಳನ್ನೋ ರಾಗವಾಗಿ ಓದುವ ವ್ಯಾಖ್ಯಾನಿಸುವ ಕ್ರಮ ಬಹಳ ಹಿಂದಿನಿಂದ ನಡೆದುಬಂದಿದೆ: ಆದಿಕವಿ ವಾಲ್ಮೀಕಿಯ ಶ್ರೀಮದ್ ರಾಮಾಯಣವನ್ನು ಮೊದಲು ಪ್ರಕಾಶಕ್ಕೆ ತಂದವರು ಅದನ್ನು ಮಧುರವಾಗಿ ಹಾಡುತ್ತ ಹೊರಟ ಕುಶಲವರು. ಪುರಾಣಗಳನ್ನು ಹೇಳುವ ಸೂತಪುರಾಣಿಕರೂ, ಶೌನಕರೂ, ವೈಶಂಪಾಯನ ಮುಂತಾದವರೂ ಆ ಪುರಾಣಗಳಷ್ಟೇ ಪ್ರಸಿದ್ಧರಾಗಿದ್ದಾರೆ. ಹೀಗೆಯೇ ಪ್ರಸಿದ್ಧರಾದ ರಾಜರ ಚರಿತ್ರೆಯನ್ನೂ ವೀರವತ್ತಾದ ಘಟನೆಗಳನ್ನೂ ವರ್ಣಿಸುವ ಗಾಥಾಗಳನ್ನು (ಹಾಡು ಗಬ್ಬಗಳು) ಜನತೆಯ ಅಪೇಕ್ಷೆಯಂತೆ ಹಾಡುತ್ತಿದ್ದುದೂ ಉಂಟು. ಪುರಾಣಗಳನ್ನು ರಾಗವಾಗಿ ಓದಿ ಜನಸಾಮಾನ್ಯರಿಗೆ ಅರ್ಥವಾಗುವಂತೆ ಹೇಳುವ ಪೌರಾಣಿಕರು ದೇಶದಲ್ಲೆಲ್ಲ ಇದ್ದಿರಬೇಕು. ನಗರಗಳಲ್ಲಿಯೂ ಹಳ್ಳಿಗಳಲ್ಲಿಯೂ ಗುಡಿಯ ಮಂಟಪಗಳಲ್ಲಿಯೂ ಅಶ್ವತ್ಥಕಟ್ಟೆಗಳಲ್ಲಿಯೂ ಕುಳಿತು ಇವುಗಳ ಅನುವಾದ, ರಸನಿರೂಪಣೆಗಳನ್ನು ಪೌರಾಣಿಕರು ಮಾಡುತ್ತಿದ್ದರೆಂದು ತೋರುತ್ತದೆ. ಅದನ್ನು ಕೇಳುವ ಜನ, ಪ್ರಾಚೀನ ಕಥೆಗಳನ್ನೂ ಉಪಾಖ್ಯಾನಗಳನ್ನೂ ಆಸ್ವಾದಿಸಿ ಮನರಂಜನೆ ಪಡೆಯುತ್ತಿದ್ದುದು ಮಾತ್ರವಲ್ಲದೆ, ಪುರಾಣಿಕರು ವಿವರಿಸುತ್ತಿದ್ದ ಅನೇಕ ಶಾಸ್ತ್ರೀಯ ಮತ್ತು ತಾತ್ತ್ವಿಕ ವಿಷಯಗಳಿಂದ ಸಾಕಷ್ಟು ಲೋಕಾನುಭವವನ್ನು ಜ್ಞಾನವನ್ನೂ ಪಡೆಯುತ್ತಿದ್ದರು. ಆ ಕಾಲದಲ್ಲಿ ಮುದ್ರಣ ಸೌಕರ್ಯವಿರಲಿಲ್ಲ. ಹಸ್ತಲಿಖಿತ ಗ್ರಂಥಗಳು ಕೆಲವರಲ್ಲಿ ಮಾತ್ರ ಇದ್ದುವು. ಇಂಥ ಪರಿಸ್ಥಿತಿಯಲ್ಲಿ ಇತರರಿಂದ ಕೇಳಿ ತಿಳಿದುಕೊಳ್ಳುವುದೇ ಜ್ಞಾನಾರ್ಜನೆಗೆ ಮುಖ್ಯ ಮಾರ್ಗವಾಗಿತ್ತು. ಮುದ್ರಣ ಬಳಕೆಗೆ ಬಂದಮೇಲೂ ಪುರಾಣಶ್ರವಣ ಕಥಾಶ್ರವಣಗಳು ನಡೆದು ಬರುತ್ತಿರುವುದನ್ನು ನೋಡಿದರೆ ಈ ಬಗೆಯ ಶ್ರವಣದಿಂದ ಆಗುವ ಪರಿಣಾಮ ಸ್ವಂತವಾಗಿ ಓದುವುದರಿಂದ ಆಗುವುದಿಲ್ಲವೆಂಬುದು ಸ್ವತಃ ಸಿದ್ಧ. ಪರಂಪರಾಗತವಾಗಿರುವ ಈ ಏರ್ಪಾಡು ದೇವಾನುದೇವತೆಗಳ ಹಾಗೂ ಪುಣ್ಯಪುರುಷರ ಚರಿತ್ರೆಗಳನ್ನು ಜನಸಾಮಾನ್ಯರಿಗೆ ಪರಿಚಯ ಮಾಡಿದ್ದು ಮಾತ್ರವಲ್ಲದೆ ಅವರ ಮನೋಧರ್ಮವನ್ನು ಚಾರಿತ್ರ್ಯವನ್ನೂ ತಿದ್ದಲು ಸಹಕಾರಿಯಾದುವು.

ಮಧ್ಯಕಾಲದಲ್ಲಿ-ಅಂದರೆ ಸುಮಾರು 15ನೆಯ ಶತಮಾನದಿಂದೀಚೆಗೆ ಹುಟ್ಟಿದ ಭಕ್ತಿಪಂಥಗಳು, ಆಗ ಜನ್ಮತಾಳಿದ ಸಂತರು ಮತ್ತು ಅವರ ಶಿಷ್ಯಪರಂಪರೆ ಕೈಗೊಂಡ ಧರ್ಮಪ್ರಚಾರ, ಜನಸಾಮಾನ್ಯರಲ್ಲಿ ಧರ್ಮಜಾಗೃತಿಯನುಂಟು ಮಾಡಿದವು. ಭಕ್ತಿಯ ಮಹಿಮೆಯನ್ನು ಸಾರುತ್ತ ಸಂತರು ಭಗವನ್ನಾಮಸಂಕೀರ್ತನೆಗೂ ಪುಣ್ಯ ಕಥಾಶ್ರವಣಕ್ಕೂ ನೈತಿಕ ಆದರ್ಶಗಳಿಗೂ ವಿಶೇಷ ಪ್ರಾಶಸ್ತ್ಯ ಕೊಟ್ಟರು. ಈ ಭಕ್ತಿಪಂಥಗಳ ಆಂದೋಲನವೇ ಆಧುನಿಕ ಕಾಲದ ಕೀರ್ತನಪದ್ಧತಿಗೆ ಹಿನ್ನೆಲೆಯಾಯಿತೆನ್ನಬಹುದು. ಅಷ್ಟೇ ಅಲ್ಲದೆ ಪ್ರಾಂತ್ಯ, ಭಾಷೆ, ಜಾತಿ-ಎಂಬ ಭೇದಭಾವಗಳನ್ನು ತೊರೆದು ಭಗವದ್ಭಕ್ತರಲ್ಲಿ ಭಾವೈಕ್ಯವನ್ನೂ ಅದು ತಂದು ಕೊಟ್ಟಿತು. ಕ್ರಮೇಣ ಕಥಾಶ್ರವಣ ಪದ್ಧತಿಯಲ್ಲಿ ಹೊಸ ರೀತಿಗಳೂ ಬೆಳೆದವು.

ಪಂಢರಪುರ ದಕ್ಷಿಣ ದೇಶದ ಕೀರ್ತನ ಚಟುವಟಿಕೆಗೆ ಒಂದು ಮುಖ್ಯಕೇಂದ್ರವಾಯಿತು. ಪೂರ್ವಕಾಲದಲ್ಲಿ ಕರ್ಣಾಟಕದ ಭಾಗವೇ ಆಗಿದ್ದ ಈ ನಗರ ಕರ್ಣಾಟಕ ದಾಸಪರಂಪರೆಗೆ ಪುಣ್ಯಕ್ಷೇತ್ರವಾಯಿತು. ಶ್ರೀಪಾದರಾಯರು, ವ್ಯಾಸರಾಯರು, ಪುರಂದರದಾಸರು-ಮುಂತಾದ ಕನ್ನಡದ ಸಂತರು-ಅದೇ ಕಾಲಕ್ಕೆ ಜ್ಞಾನದೇವ, ನಾಮದೇವ- ಮುಂತಾದ ಮಹಾರಾಷ್ಟ್ರ ಸಂತರು-ವಿಠಲದೇವರಿಂದ ಸ್ಫೂರ್ತಿಯನ್ನು ಪಡೆದು ಭಗವನ್ನಾಮ ಸಂಕೀರ್ತನೆ ಮಾಡುತ್ತ ದೇಶದಲ್ಲೆಲ್ಲ ಸಂಚರಿಸಿದರು. ಆಗಿನ ಕಾಲದ ಕನ್ನಡನಾಡಿನ ಹರಿದಾಸರು ಈಗಿನ ಕೀರ್ತನಕಾರರಂತೆ ಹರಿಕಥೆಯನ್ನು ಮಾಡಿದರೋ ಮಾಡಿಸಿದರೋ ತಿಳಿಯದು. ಆದರೆ ಈಗ ದಕ್ಷಿಣ ದೇಶದಲ್ಲೆಲ್ಲ ರೂಢಿಯಲ್ಲಿರುವ ಕಥೆ ಮಾಡುವ ಪದ್ಧತಿಗೆ ಅಂಕುರಾರ್ಪಣೆಯಾಯಿತೆನ್ನಬಹುದು. ಶಿವಾಜಿ ಮಹಾರಾಜನ ಗುರುವಾಗಿದ್ದ ಸಮರ್ಥರಾಮದಾಸ ಮಹಾರಾಷ್ಟ್ರದಲ್ಲೆಲ್ಲ ಧರ್ಮಪ್ರಚಾರ ಕಾರ್ಯವನ್ನು ತನ್ನ ಶಿಷ್ಯರ ಮುಖಾಂತರ ಕೈಕೊಂಡಿದ್ದ ಎಲ್ಲರಿಗೂ ತಿಳಿದ ವಿಷಯ. ಈ ಶಿಷ್ಯರು ಹೋದೆಡೆಯಲ್ಲೆಲ್ಲ, ನಾಮಸಂಕೀರ್ತನೆಯನ್ನು ಮಾಡಿದ್ದಲ್ಲದೆ, ಪ್ರವಚನಗಳ ಮೂಲಕವೂ ಸೇರಿದ ಜನರಿಗೆ ಬೋಧೆಯನ್ನೂ ಪ್ರಚೋದನೆಯನ್ನೂ ಒದಗಿಸಿದರು. ಇದೇ ಪರಂಪರೆಗೆ ಸೇರಿದ ಸಂತ ತುಕಾರಾಮ್ ಪಂಢರಪುರ ದೇವಾಲಯದಲ್ಲಿ ಈ ರೀತಿಯ ಕೀರ್ತನೆಗಳನ್ನೂ ಭಜನೆ, ಅಭಂಗ ಗಾಯನ, ಪ್ರವಚನಗಳನ್ನೂ ಮಾಡುತ್ತಿದ್ದನೆಂದೂ ಅದನ್ನು ಕೇಳಲು ಶಿವಾಜಿ ಮಹಾರಾಜನೇ ಅಜ್ಞಾತನಾಗಿ ಬರುತ್ತಿದ್ದನೆಂದೂ ಪ್ರತೀತಿ. ರಾಮದಾಸ ಹಾಗೂ ತುಕಾರಾಮರ ಕೀರ್ತನೆಗಳೇ ದಕ್ಷಿಣ ದೇಶದಲ್ಲಿ ಈಗ ರೂಢಿಯಲ್ಲಿರುವ ಹರಿಕಥೆಗಳ ಉಗಮವೆಂದು ಕೆಲವರ ಅಭಿಪ್ರಾಯ. ಆದರೆ ಕನ್ನಡ ನಾಡಿನಲ್ಲಿ ಭಕ್ತಿಪಂಥದ ಉಗಮ, ಬೆಳೆವಣಿಗೆಗಳನ್ನೂ ಹರಿದಾಸ ಪಂಥದ ವ್ಯಾಪ್ತಿಯನ್ನೂ ನೋಡಿದರೆ ಕಥೆಗಾರಿಕೆಯಲ್ಲಿ ಕನ್ನಡಿಗರದ್ದೇ ವಿಶೇಷವಾದ ಒಂದು ಮಾರ್ಗ ಬೆಳೆದುಬಂದಿರುವಂತೆ ತೋರುತ್ತದೆ. ಭಾಗವತರ ವೇಷಭೂಷಣಗಳು, ಕಥಾವಸ್ತುವನ್ನು ಬೆಳೆಸುವ ಕ್ರಮ, ಸಂಗೀತ, ನೃತ್ಯಗಳ ಬಳಕೆ-ಇವೆಲ್ಲದರಲ್ಲೂ ತಮಿಳುದೇಶ, ಆಂಧ್ರ, ಮಹಾರಾಷ್ಟ್ರ ಮತ್ತು ಕನ್ನಡದೇಶಗಳ ಪದ್ಧತಿಗಳಲ್ಲಿ ಸ್ಥೂಲವಾಗಿ ಸಾಮ್ಯ ಕಂಡರೂ ವಿವರಗಳಲ್ಲಿ ವಿಶೇಷ ಭಿನ್ನತೆ ಇದೆ. ಆದ್ದರಿಂದ ಒಂದರಿಂದ ಇನ್ನೊಂದು ಹುಟ್ಟಿತೆನ್ನುವುದಕ್ಕಿಂತ ಎಲ್ಲ ಒಟ್ಟಾಗಿ ಬೆಳೆದುವು, ಒಂದನ್ನು ಇನ್ನೊಂದು ಅನುಕರಿಸಿತು ಒಂದು ಹೇಳುವುದು ಸಾಧು.

ಇಂದಿಗೂ ಮಹಾರಾಷ್ಟ್ರದಲ್ಲಿಯೂ ಅದರ ಸುತ್ತಮುತ್ತಲಿನ ಪ್ರದೇಶಗಳಲ್ಲೂ ಈ ಕೀರ್ತನಪದ್ಧತಿ ವಿಕಾಸಗೊಂಡು ದಾಸರು ಧರ್ಮಪ್ರವಾದಿಗಳಿಗೆ ಒಪ್ಪುವಂಥ ಒಂದು ಉದ್ದವಾದ ಕಾಷಾಯದ ನಿಲುವಂಗಿಯನ್ನು ಧರಿಸಿ ತಮ್ಮ ಕಥೆಯನ್ನು ಹೇಳುತ್ತಾರೆ. ಅವರ ಪದ್ಧತಿಯ ಒಂದು ವೈಶಿಷ್ಟ್ಯ, ಮಧ್ಯೆ ಮಧ್ಯೆ ಸಾಮೂಹಿಕವಾಗಿ ಶ್ರೋತ್ರಗಳೆಲ್ಲರ ಬಾಯಿಯಿಂದಲೂ ನಾಮಭಜನೆಯನ್ನು ಮಾಡಿಸುವುದು. ಇತರ ಪ್ರಾಂತ್ಯಗಳಲ್ಲಿ ಇದು ಅಷ್ಟು ರೂಢಿಯಲ್ಲಿಲ್ಲ.

ಆಂಧ್ರದಲ್ಲಿ ದಾಸರು ಒಳ್ಳೆಯ ವೇಷಭೂಷಣಗಳನ್ನು ಧರಿಸಿ ಹಿನ್ನಲೆಯ ವಾದ್ಯ ಮೇಳದೊಡನೆ ಹಾಡುತ್ತ ಕಾಲಕ್ಷೇಪ ನಡೆಸುತ್ತಾರೆ. ಅವರ ವೈಶಿಷ್ಟ್ಯವೆಂದರೆ ಭರತನಾಟ್ಯದ ರೀತಿಯಲ್ಲಿ ಆಗಾಗ್ಗೆ ನೃತ್ಯ ಮಾಡುವುದು, ತಮ್ಮ ಅಂಗವಿನ್ಯಾಸವನ್ನೂ ಅಭಿನಯವನ್ನೂ ಹಾಡುವ ಕಾಲದಲ್ಲಿ ಅಳವಡಿಸಿಕೊಳ್ಳುವುದು. ಭರತನಾಟ್ಯದ ಅಂಶಗಳ ಪ್ರದರ್ಶನ ಆಂಧ್ರದಲ್ಲಿರುವಂತೆ ಇತರ ಪ್ರಾಂತಗಳಲ್ಲಿಲ್ಲ. ಇದು ಪ್ರಾಯಶಃ ಅವರಲ್ಲಿರುವ ಕೂಚಿಪುಡಿ ಭಾಗವತ ಸಂಪ್ರದಾಯದ ಪ್ರಭಾವದಿಂದಾಗಿರಬಹುದು.

ತಮಿಳು ನಾಡಿನ ಕೀರ್ತನಕಾರರು ತಮ್ಮದೇ ಆದ ರೀತಿಯಲ್ಲಿ ಕಲೆಯನ್ನು ಬೆಳೆಸಿಕೊಂಡಿದ್ದಾರೆ, ಉತ್ತಮ ಗೃಹಸ್ಥ ವೇಷಭೂಷಣ ಧರಿಸಿ, ಸಂಗೀತಕ್ಕೂ ರಸಭರಿತವಾಗಿ ಕಥೆಯನ್ನು ಹೇಳುವುದಕ್ಕೂ ಅವರು ಪ್ರಾಶಸ್ತ್ಯ ಕೊಟ್ಟಿದ್ದಾರೆ. ತಮಿಳುನಾಡಿನಲ್ಲಿ ಕೀರ್ತನಕಾರರನ್ನೂ ಭಾಗವತರೆಂದು ಕರೆಯುತ್ತಾರೆ. ಅವರಲ್ಲಿ ಅನೇಕರು ಶಾಸ್ತ್ರಗಳನ್ನು ಅಭ್ಯಾಸ ಮಾಡಿ ಸಂಸ್ಕøತದಲ್ಲಿ ಪಾಂಡಿತ್ಯವನ್ನೂ ಪಡೆದಿರುತ್ತಾರೆ. ಮೂಲ ಸಂಸ್ಕøತ ಶ್ಲೋಕಗಳನ್ನು ಉದಾಹರಿಸಿ ಅನುವಾದ ಮಾಡುತ್ತಾ ಹೋಗುತ್ತಾರೆ. ಈ ಸುದೀರ್ಘ ವ್ಯಾಖ್ಯಾನಗಳು ಬೇಸರವಾಗದಂತೆ ಶ್ಲೋಕಗಳನ್ನೂ ಸಂಗೀತಕೃತಿಗಳನ್ನೂ ಶಾಸ್ತ್ರೀಯವಾಗಿ ಹಾಡುತ್ತಾರೆ. ಇದಕ್ಕಾಗಿ ಹಿಮ್ಮೇಳದವರೂ ಇರುತ್ತಾರೆ. ಒಮ್ಮೊಮ್ಮೆ ಈ ಕಾಲಕ್ಷೇಪಗಳು ಸಂಗೀತ ಕಚೇರಿಗಳೇ ಆಗಿಬಿಡುತ್ತದೆ. ಈ ಮಾತುಗಳೇ ಕೇರಳದ ಕಲಾವಿದರಿಗೂ ಬಹುಮಟ್ಟಿಗೆ ಅನ್ವಯಿಸುತ್ತವೆ.

ಕರ್ಣಾಟಕದ ಕೀರ್ತನಕಾರರಲ್ಲಿ-ಅವರವರ ವೈಯಕ್ತಿಕ ಅಭಿರುಚಿಗೂ ಸಾಮಥ್ರ್ಯಕ್ಕೂ ಅನುಗುಣವಾಗಿ, ನಾಮಭಜನೆ, ಪ್ರವಚನ, ಸಂಸ್ಕøತ ಶ್ಲೋಕಗಳು, ವ್ಯಾಖ್ಯಾನ, ಉಪಕಥೆಗಳು-ಇವೆಲ್ಲವೂ ಬೆರೆತು ಕೀರ್ತನಕಲೆ ವಿಕಾಸಗೊಳ್ಳುತ್ತದೆ, ವೀರಶೈವರಿಗೂ ಜೈನರಿಗೂ ಕರ್ಣಾಟಕವೇ ಮುಖ್ಯ ವಾಸಸ್ಥಾನವಾಗಿರುವುದರಿಂದ ಇಲ್ಲಿ ಹರಿಕಥೆಗಳ ಜೊತೆಗೆ ಶಿವಕಥೆಗಳೂ ಪ್ರಚಲಿತವಾಗಿವೆ. ಈ ಎಲ್ಲ ಬಗೆಯ ಕೀರ್ತನೆಗಳನ್ನೂ ಕೇಳಲು ಎಲ್ಲ ಮತಾವಲಂಬಿಗಳೂ ಸೇರುವುದು, ಕರ್ಣಾಟಕದಲ್ಲಿ ಹಿಂದಿನ ಕಾಲದಿಂದಲೂ ನಡೆದು ಬಂದಿರುವ ಧರ್ಮಸಹಿಷ್ಣುತೆಯ ನಿದರ್ಶನವಾಗಿದೆ.

ಕಥಾ ನಿರೂಪಣೆ ಇವುಗಳ ಮುಖ್ಯ ಅಂಶವಾಗಿದ್ದರೂ ಅದನ್ನು ಹೃದಯಂಗಮವಾಗಿಯೂ ಪ್ರಭಾವಪೂರ್ಣವಾಗಿಯೂ ಮಾಡುವುದಕ್ಕಾಗಿ ಇದರಲ್ಲಿ ತೊಡಗುವವರು ಸಂಗೀತ, ನೃತ್ಯ, ಅಭಿನಯ, ಉಪಕಥೆ, ಉಪನ್ಯಾಸ ಶಾಸ್ತ್ರಾನುವಾದ, ಸಾಮೂಹಿಕ ಭಜನೆ ಇವನ್ನು ಸಂದರ್ಭಾನುಸಾರವಾಗಿ ತಮ್ಮ ಶಕ್ತಿಗೆ ಅನುಗುಣವಾಗಿ ಬಳಸುತ್ತ ಬಂದಿದ್ದಾರೆ. ಹೀಗಾಗಿ ಇದೊಂದು ಅನೇಕ ಕಲೆಗಳ ಸಮ್ಮಿಶ್ರಣವಾಗಿ ರೂಪಗೊಂಡು ವಿಕಾಸ ಹೊಂದಿದೆ. ಇದು ದಕ್ಷಿಣ ಭಾರತಕ್ಕೆ ಅನ್ವಯಿಸುವ ಮಾತು. ದಕ್ಷಿಣ ದೇಶದಲ್ಲಿನ ಆಕಾಶವಾಣಿ ಕೇಂದ್ರಗಳಲ್ಲಿ ಈ ಕಲೆಗೆ ಅವಕಾಶವನ್ನು ಹಿಂದಿನಿಂದ ನೀಡಲಾಗಿದೆ.

ಜನತೆಯ ಶಿಕ್ಷಣಕ್ಕೂ ಪ್ರಚಾರಕ್ಕೂ ಇದೊಂದು ಉತ್ತಮ ವಿಧಾನವೆಂದು ಮನಗಂಡು ಕ್ರೈಸ್ತ ಧರ್ಮಪ್ರಚಾರದಲ್ಲಿ ತೊಡಗಿರುವವರೂ ಕ್ರೈಸ್ತಕೀರ್ತನೆಗಳನ್ನು ಮಾಡುವುದಕ್ಕೆ ಆರಂಭಿಸಿದ್ದಾರೆ. ಕೇವಲ ಉಪನ್ಯಾಸ, ಪ್ರವಚನಗಳಿಂದ ಜನ ಆಕರ್ಷಿತರಾಗುವುದಿಲ್ಲವೆಂದು ಮನಗೊಂಡು ಈ ಕಾಲಕ್ಷೇಪ ಪದ್ಧತಿಯನ್ನು ಅವರೂ ರೂಢಿಸಿಕೊಳ್ಳುತ್ತಿದ್ದಾರೆ. ಮೂಲತಃ ಭಕ್ತಿ ಪ್ರಚಾರಕ್ಕೂ ಧರ್ಮಪ್ರಚಾರಕ್ಕೂ ಮೀಸಲಾಗಿದ್ದ ಕೀರ್ತನ ಪದ್ಧತಿಯನ್ನು ಆಧುನಿಕ ಕಾಲದಲ್ಲಿ ವಿವಿಧೋದ್ದೇಶಗಳ ಸಾಧನೆಗೆ ಬಳಸಲಾಗುತ್ತದೆ. ಅಕ್ಷರ ಪ್ರಚಾರ, ಸಾರ್ವಜನಿಕ ಆರೋಗ್ಯ ಶಿಕ್ಷಣ, ಪಾನನಿರೋಧ ಪ್ರಚಾರ, ರಾಜಕೀಯ ಪ್ರಚಾರ, ಮುಂತಾದ ಲೌಕಿಕ ಕಾರ್ಯಗಳಿಗಾಗಿಯೂ ಈ ವಿಧಾನವನ್ನು ಉಪಯೋಗಿಸಲಾಗುತ್ತಿದೆ. ಆಗೊಮ್ಮೆ ಈಗೊಮ್ಮೆ ಪ್ರಸಿದ್ಧ ವಿಜ್ಞಾನಿಗಳ ಜೀವನವನ್ನು ಕುರಿತು ಕಥೆ ಮಾಡಿರುವ ನಿದರ್ಶನಗಳೂ ಇವೆ. ಆದರೆ ಇಂದಿಗೂ ಹೆಚ್ಚಿನ ಪ್ರಮಾಣದಲ್ಲಿ ಪ್ರಯೋಗವಾಗುತ್ತಿರುವುದು ಪುರಾಣ ಪುಣ್ಯ ಕಥೆಗಳೇ.

ರಾಮಾಯಣ, ಮಹಾಭಾರತ ಮತ್ತು ಭಾಗವತಗಳು ಕಥೆಗಳ ಕಣಜವಾಗಿರುವುದರಿಂದ ಕೀರ್ತನಕಾರರಿಗೆ ಸಾಕಷ್ಟು ವಿಷಯಗಳು ಇವುಗಳಲ್ಲಿ ಸಿದ್ಧವಾಗಿ ದೊರೆಯುತ್ತವೆ. ಇವನ್ನು ಆಮೂಲಾಗ್ರವಾಗಿ ಮನನ ಮಾಡಿಕೊಂಡು ಅನೇಕ ಕಥೆಗಳನ್ನಾಗಿ ವಿಂಗಡಿಸಿಕೊಂಡು, ಪ್ರವಚನಮಾಡಿ ಮುಗಿಸಿ ಮಂಗಳವನ್ನು ಆಚರಿಸುವ ಪದ್ಧತಿ ಇದೆ ; ಅಥವಾ ಇವುಗಳಲ್ಲಿ ಒಂದು ಭಾಗವನ್ನೊ ಉಪಖ್ಯಾನವನ್ನೊ ತೆಗೆದುಕೊಂಡು ಕಥೆಯನ್ನು ಹೇಳುವ ರೂಢಿಯೂ ಉಂಟು. ಇವೇ ಅಲ್ಲದೆ ಸಾಧುಸಂತರ ಜೀವನ ಚರಿತ್ರೆಗಳು ಅಂದರೆ ಪುರಂದರದಾಸರು, ಕನಕದಾಸರು, ಸಮರ್ಥರಾಮದಾಸರು, ತುಕಾರಾಮ, ತ್ಯಾಗರಾಜ, ರಾಮಕೃಷ್ಣ, ವಿವೇಕಾನಂದ, ಸಾಯಿಬಾಬ ಮುಂತಾದವರ ಮಹಿಮಾಪೂರ್ಣ ಜೀವನ ಚರಿತ್ರೆಗಳು ಕಥಾಕಾಲಕ್ಷೇಪದ ವಸ್ತುಗಳಾಗಿರುವುದೂ ಉಂಟು. ಈಚೆಗೆ ಭದ್ರಗಿರಿ ಕೇಶವದಾಸರು ಇಂಗ್ಲಿಷ್‍ನಲ್ಲಿ ಕಥೆ ಮಾಡುವ ಒಂದು ಕ್ರಮವನ್ನು ರೂಢಿಸಿಕೊಂಡು ದೇಶ ವಿದೇಶಗಳಲ್ಲಿ ಪ್ರವಚನ ಮಾಡಿ ಖ್ಯಾತಿ ಗಳಿಸಿದ್ದಾರೆ.

ಕೀರ್ತನಕಲೆಯನ್ನು ಕೆಲವರು ತಮ್ಮ ಜೀವನವೃತ್ತಿಯಾಗಿಯೂ ಕೆಲವರು ತಮ್ಮ ವಿರಾಮಕಾಲದ ಉಪವೃತ್ತಿಯನ್ನಾಗಿಯೂ ಮಾಡಿಕೊಂಡಿದ್ದಾರೆ. ಕೀರ್ತನೆ ಮುಗಿಯುವುದಕ್ಕೆ ಮುಂಚೆ ದೇವರ ಪಟಕ್ಕೆ ಮಂಗಳಾರತಿಯನ್ನೆತ್ತಿ ಆರತಿ ತಟ್ಟೆಂiÀ
ುನ್ನು ಸಭಿಕರ ಮಧ್ಯೆ ತೆಗೆದುಕೊಂಡು ಹೋದಾಗ ಶ್ರೋತೃಗಳು ತಮ್ಮ ಶಕ್ತ್ಯಾನುಸಾರ ಕಾಣಿಕೆ ಹಾಕುತ್ತಾರೆ. ಈ ಕಾಣಿಕೆಯೇ ಕೀರ್ತನಕಾರರಿಗೆ ಸಲ್ಲುವ ಸಂಭಾವನೆ. ಕೆಲವು ವೇಳೆ ಒಂದು ಸಂಸ್ಥೆಯವರು ಈ ಕಥೆಗೆ ಏರ್ಪಾಡುಮಾಡಿ ಕೀರ್ತನಕಾರರಿಗೆ ಸಂಭಾವನೆ ಕೊಡುವುದೂ ಉಂಟು. ಹೇಗೇ ಇರಲಿ ಕೀರ್ತನಕಾರರು ಈ ಅನಿರ್ದಿಷ್ಟವಾದ, ಬಹಳ ಏರಿಳಿತಕ್ಕೆ ಗುರಿಯಾಗುವ ವರಮಾನವನ್ನೇ ಅವಲಂಬಿಸಬೇಕಾಗುತ್ತದೆ. ಪ್ರಖ್ಯಾತ ಕೀರ್ತನಕಾರರನ್ನು ಬಿಟ್ಟರೆ, ಈ ಕಲೆಯಲ್ಲಿ ತೊಡಗಿರುವವರಿಗೆ ಸಿಗುವುದನ್ನು ಸಂಗೀತ ಮುಂತಾದ ಕಲಾವಿದರಿಗೆ ದೊರೆಯುವ ವರಮಾನದೊಂದಿಗೆ ಹೋಲಿಸಿದರೆ, ತೀರ ಅಲ್ಪವೆಂದೇ ಹೇಳಬೇಕು. ಆದರೆ ಈ ಕಲೆಯಲ್ಲಿ ನಿಷ್ಣಾತರಾದವರು ಜನರ ಪ್ರೀತಿ ಗೌರವಗಳನ್ನು ಗಳಿಸಿ, ಈ ವೃತ್ತಿಯಿಂದ ತಕ್ಕ ಮಟ್ಟಿಗೆ ಸಂಪಾದನೆ ಮಾಡುತ್ತಾರೆ.

 ಕೀರ್ತನ ಕಲೆ ಅನೇಕ ಮುಖ್ಯ ಕಲೆಗಳ ಮೇಳವಾಗಿರುವುದರಿಂದ ಇದರಲ್ಲಿ ನೈಪುಣ್ಯ ಪಡೆದ ಅಗ್ರಗಣ್ಯರಾಗುವುದು ಸುಲಭವಲ್ಲ. ಕೆಲವರಿಗೆ ಹುಟ್ಟುಗುಣವಾಗಿಯೇ ಈ ಕಲೆಯಲ್ಲಿ ಸಾಮಥ್ರ್ಯವಿರುತ್ತದೆ ; ಅದು ಅನುವಂಶಿತವಾಗಿ ಬಂದದ್ದೂ ಆಗಿರಬಹುದು ; ಉತ್ತಮ ಗುರುಗಳ ಉಪದೇಶದ ಮೂಲಕ ಅವರು ಕಲಿತದ್ದಿರಬಹುದು. ಆದರೆ ಈ ಕಲೆಯ ಎಲ್ಲ ಅಂಶಗಳ ನೈಪುಣ್ಯ ದೀರ್ಘ ಸಾಧನದಿಂದಲೇ ಸಿದ್ಧಿಸಬೇಕು.

ಕಲೆಯ ಮುಖ್ಯ ಭಾಗ ಕಥೆಯ ಪ್ರತಿಪಾದನೆ. ಇದು ಸಾಹಿತ್ಯಕ್ಕೂ ವಾಗ್ಮಿತೆಗೂ ಸಂಬಂಧಿಸಿದ ಪ್ರೌಢಿಮೆ. ಭಾಷಾಜ್ಞಾನ, ಸಾಹಿತ್ಯ ಪರಿಚಯ ಚೆನ್ನಾಗಿ ಉಳ್ಳವರು ಮಾತ್ರವೇ ಸಾಕಷ್ಟು ಶಬ್ದಸಂಪತ್ತನ್ನು ಪಡೆದು, ಔಚಿತ್ಯವನ್ನರಿತು ಶಬ್ದಪ್ರಯೋಗ ಮಾಡಿ ತಕ್ಕ ಪರಿಣಾಮವನ್ನುಂಟು ಮಾಡಬಲ್ಲರು. ಈ ಕಥಾಸಾಹಿತ್ಯ ಬಹುಮಟ್ಟಿಗೆ ವೈಯಕ್ತಿಕ ರಚನೆ ; ಅಥವಾ ಗುರುಗಳಿಂದ ಬಂದದ್ದು. ಹೊಸಕೆರೆ ಚಿದಂಬರಯ್ಯನವರ ಕೀರ್ತನ ಕಂಠಾಭರಣ. ಬೇಲೂರು ಕೇಶವದಾಸರ ಭಕ್ತ ವಿಜಯ-ಇಂಥ ಸಾಹಿತ್ಯವನ್ನೊದಗಿಸಿವೆ. ಭದ್ರಗಿರಿ ಅಚ್ಯುತದಾಸರೂ, ಕೇಶವದಾಸರೂ ಈ ಸಾಹಿತ್ಯವನ್ನು ಒದಗಿಸುತ್ತಿದ್ದಾರೆ.

ಕಥನದಲ್ಲಿ ವಾಗ್ಮಿ ಬಹುಮುಖ್ಯ ಅಂಶ. ಸ್ಫುಟವೂ ನಿರರ್ಗಳವೂ ನಿರ್ದುಷ್ಟವೂ ಆದ ಉಚ್ಚಾರಣೆಯಿಂದಲೇ ಸಭಿಕರ ಮೇಲೆ ಸರಿಯಾದ ಪರಿಣಾಮ ಉಂಟಾಗಬೇಕಾದರೆ ಧ್ವನಿಯನ್ನು ಸೂಕ್ತರೀತಿಯಲ್ಲಿ ಅಳವಡಿಸಿಕೊಂಡು ಎತ್ತರಿಸಿಯೋ ತಗ್ಗಿಸಿಯೋ ಅಲ್ಲಲ್ಲಿ ಅಲ್ಪ ವಿರಾಮ ಕೊಟ್ಟು, ಕಥೆ ಹೇಳುವುದರಿಂದ ಶ್ರೋತೃಗಳ ಗಮನವನ್ನು ಇನ್ನೂ ತೀವ್ರವಾಗಿ ಆಕರ್ಷಿಸಬಹುದು. ಉತ್ತಮ ನಟರ ಹಾಗೂ ಉಪನ್ಯಾಸಕರ ವಾಕ್ಪಟುತ್ವವೂ ವಾಗ್ವಿಲಾಸವೂ ಕೀರ್ತನಕಾರರಿಗೆ ಬೇಕು. ಪುರಂದರದಾಸರು ತನ್ನ ಒಂದು ದೇವರನಾಮದಲ್ಲಿ ಉತ್ತಮ ಹರಿದಾಸರ ಲಕ್ಷಣಗಳನ್ನು ವಿವರಿಸಿದ್ದಾರೆ. ಸಂಗೀತ ಕೀರ್ತನಕಲೆಯ ಒಂದು ಅಂಶವಾದರೂ ಅದು ಮುಖ್ಯಾಂಶವಲ್ಲ. ಸಂದರ್ಭಾನುಸಾರ ಕಥಾಭಾಗ ಹೃದಯಂಗಮವಾಗಲು, ಹಾಗೂ ಸರಿಯಾದ ವಾತಾವರಣ ಏರ್ಪಡಲು ಒಂದು ಕೃತಿ, ದೇವರನಾಮ, ಸುಳಾದಿ, ಉಗಾಭೋಗ, ವಚನ-ಇವನ್ನು ರಾಗಯುಕ್ತವಾಗಿ ಹೇಳಿ ಮುಂದುವರಿಯುವುದು ಸೂಕ್ತವೇ ಹೊರತು, ಸಂಗೀತಾದಿ ಇತರ ಅಂಶಗಳು ಪ್ರಧಾನವಾಗಿ ಕಥೆ ಮಂಕಾಗುವಂತೆ ಮಾಡಬಾರದು.

ಅಭಿನಯ ಅಂದರೆ ಅಂಗವಿನ್ಯಾಸ, ಮುಖಮುದ್ರೆ, ಕಥಾನಿರೂಪಣೆಯಲ್ಲಿ ವಿಶೇಷಸ್ಥಾನ ಪಡೆದಿದೆ. ಕಥೆಯನ್ನು ಹೇಳುವವರು ಅದರ ಭಾವವನ್ನು ಸವಿದು ತಲ್ಲೀನರಾದಾಗ ಸಹಜವಾಗಿಯೇ ಸೂಕ್ತವಾದ ಅಭಿನಯದಿಂದ ತಮ್ಮ ನಿರೂಪಣೆಯನ್ನು ಹೆಚ್ಚು ಪ್ರಭಾವಯುತವನ್ನಾಗಿ ಮಾಡಬಲ್ಲರು. ಅದರಲ್ಲಿಯೂ ಕಥೆಯಲ್ಲಿ ಸಂಭಾಷಣೆಗಳು ಬಂದಾಗ, ಇಬ್ಬರು ಮೂವರು ಪಾತ್ರವಹಿಸಿದಾಗ ಕೀರ್ತನಕಾರ ತನ್ನ ಧ್ವನಿಯನ್ನು ಬದಲಾಯಿಸುತ್ತ ಒಂದು ನಾಟಕದ ದೃಶ್ಯವನ್ನೇ ಅಭಿನಯಿಸಲು ಅವಕಾಶವುಂಟು. ಅನೇಕ ಕೀರ್ತನಕಾರರಿಗೆ ಈ ಕೌಶಲವಿರುತ್ತದೆ ; ಕಥೆಯ ನಾಟಕೀಯ ಭಾಗಗಳನ್ನು ಏಕಪಾತ್ರಾಭಿನಯ ವಿಧಾನದಿಂದ ಅಭಿನಯಿಸಿ ಶ್ರೋತೃಗಳಿಗೆ ಒಳ್ಳೆಯ ಮನೋರಂಜನೆಯನ್ನು ಒದಗಿಸಬಹುದು. ಆದರೆ ಇಂಥ ಕಥಾ ಭಾಗಗಳು ಉತ್ತಮ ಸಾಹಿತ್ಯದ ಲಕ್ಷಣಗಳಿಂದ ಕೂಡಿರಬೇಕಾದ್ದು ಗಮನಿಸಬೇಕಾದ ವಿಷಯ.

ಆಂಧ್ರದಲ್ಲಿರುವಂತೆ ಭರತನಾಟ್ಯ ಭಂಗಿಗಳನ್ನೂ ಹೆಜ್ಜೆಗಳನ್ನೂ ಆಗಾಗ್ಗೆ ಒಂದು ಮಿತಿಯಲ್ಲಿ ಅಳವಡಿಸಿಕೊಂಡಾಗ ಕೀರ್ತನಕಾರನ ಕಲೆಗೆ ಒಂದು ಲಾವಣ್ಯ ಬರುತ್ತದೆ ಕರ್ಣಾಟಕದಲ್ಲಿ ಇದು ರೂಢಿಯಲ್ಲಿಲ್ಲ. ಇದಕ್ಕೆ ತರಬೇತೂ ಅಂಗಸೌಷ್ಠವವೂ ಬೇಕು. ಕೆಲವು ಸ್ತ್ರೀಯರು ಈ ಕಲೆಯ ಉಪಾಸಕರಾಗುತ್ತಿದ್ದಾರೆ. ಅಂಥವರಿಗೆ ಈ ನೃತ್ಯ ಭಾಗಗಳನ್ನು ಅಳವಡಿಸಿಕೊಳ್ಳುವುದು ಸುಲಭವಾದೀತು.

ಈಚಿನವರೆಗೂ ಕಲೆಗಳು ಗುರುಶಿಷ್ಯ ಪರಂಪರೆಯ ಮಾರ್ಗದಿಂದಲೇ ಉಳಿಯುತ್ತ, ಬೆಳೆಯುತ್ತ ಬಂದುವು. ಆದರೆ ಹೆಚ್ಚು ಜನ ಇವುಗಳ ಅಭ್ಯಾಸವನ್ನು ಮಾಡಲು ಅವಕಾಶವಿರುವಂತೆ ಈಗ ಶಾಲೆಗಳೂ ಕಲಾಕ್ಷೇತ್ರಗಳೂ ಸಂಸ್ಥೆಗಳೂ ರೂಪ ತಾಳಿವೆ. ಆದರೆ ಕೀರ್ತನಕಲೆಗೆ ಈ ವ್ಯವಸ್ಥೆಯನ್ನು ಮಾಡಲು ಬಹಳ ವಿಳಂಬವಾಯಿತು. ಈ ಕೊರತೆಯನ್ನು ನಿವಾರಿಸಲು ಈಗೀಗ ಪ್ರಯತ್ನಗಳು ನಡೆಯುತ್ತಿವೆ. ತಿರುವಾದಿ, ಹೈದರಾಬಾದ್, ಬೆಂಗಳೂರು-ಈ ಸ್ಥಳಗಳಲ್ಲಿ ಕೀರ್ತನ ಕಲೆಯ ಅಭ್ಯಾಸಕ್ಕೆಂದು ಶಾಲೆಗಳನ್ನು ಸ್ಥಾಪಿಸಿ ನಡೆಸುವ ಪ್ರಯತ್ನಗಳು ನಡೆದಿವೆ.

ಧ್ವನಿಸಹಿತ ಪ್ರದರ್ಶಿಸುವ ಚಲನಚಿತ್ರಗಳನ್ನು ಬಿಟ್ಟರೆ, ಜನತೆಯ ಶಿಕ್ಷಣಕ್ಕೆ ಕೀರ್ತನೆಯಷ್ಟು ಪರಿಣಾಮಕಾರಿಯಾದ ವಿಧಾನ ಮತ್ತೊಂದಿಲ್ಲ. ಜೀವರಹಿತ ಚಿತ್ರಗಳಿಗಿಂತಲೂ ಸಜೀವವಾದ ಈ ಕಲೆ, ಕೀರ್ತನಕಾರನ ವ್ಯಕ್ತಿತ್ವದಿಂದ ಅಚ್ಚಳಿಯದ ರೀತಿಯಲ್ಲಿ ಪ್ರಭಾವವನ್ನುಂಟುಮಾಡಬಲ್ಲುದು. ಈಚೆಗೆ ಸುಶಿಕ್ಷಿತರಾದವರು ಈ ಕಾಲಕ್ಷೇಪಗಳನ್ನು ಕೇಳಲು ಅಷ್ಟು ಸಂಖ್ಯೆಯಲ್ಲಿ ಹೋಗದಿದ್ದರೂ ಸಮಾಜದಲ್ಲಿ ಅನೇಕರು, ವಿಶೇಷವಾಗಿ ಮಹಿಳೆಯರು, ಇದರಲ್ಲಿ ಆಸಕ್ತರಾಗಿ ಹೆಚ್ಚು ಸಂಖ್ಯೆಯಲ್ಲಿ ನೆರೆಯುತ್ತಾರೆ. ಉಪನ್ಯಾಸಗಳನ್ನೂ ಭಾಷಣಗಳನ್ನೂ ಕೇಳಲೂ ಅಷ್ಟು ಸಂಖ್ಯೆಯಲ್ಲಿ ಜನ ಸೇರುವುದಿಲ್ಲವೆಂಬುದು ಎಲ್ಲರ ಅನುಭವಕ್ಕೆ ಬಂದ ವಿಷಯ. ಜನರಲ್ಲಿ, ವಿಶೇಷವಾಗಿ ಹಳ್ಳಿಗರಲ್ಲಿ, ಅಕ್ಷರಜ್ಞಾನ ಸಾಕಷ್ಟು ಇಲ್ಲದಿರುವುದರಿಂದ ಪುಸ್ತಕಗಳನ್ನೂ ಪತ್ರಿಕೆಗಳನ್ನೂ ಓದುವ ಅಭ್ಯಾಸ ಬಹಳ ಕಡಿಮೆ. ಇಂಥ ಪರಿಸ್ಥಿತಿಯಲ್ಲಿ ಕೀರ್ತನ ಸಂಪ್ರದಾಯವನ್ನು ಬಲಗೊಳಿಸಿ, ದಕ್ಷರಾದ ಕೀರ್ತನಕಾರರು ಜನತಾ ಶಿಕ್ಷಣಕಾರ್ಯವನ್ನು ಕೈಕೊಳ್ಳಲು ಅವಕಾಶವಿದೆ ; ಅದರ ಅಗತ್ಯವೂ ಇದೆ.

ಕೀರ್ತನ ಕಲೆಯಲ್ಲಿ ಸಾಕಷ್ಟು ಕೆಲಸ ಮಾಡಿರುವ ಪ್ರಮುಖರಲ್ಲಿ ಕೆಲವರನ್ನು ಇಲ್ಲಿ ಹೆಸರಿಸಬಹುದು. ಬೇಲೂರು ಕೇಶವದಾಸರು, ಹಂಡೆ ಶ್ರೀಪಾದದಾಸರು, ವೇಣುಗೋಪಾಲದಾಸರು, ಗಮಕಿ ರಾಮಕೃಷ್ಣಶಾಸ್ತ್ರಿಗಳು, ಜಯತೀರ್ಥಾಚಾರ್ಯರು, ಗೋಪಿನಾಥದಾಸರು, ಜಯಸಿಂಹದಾಸರು, ಲಕ್ಷ್ಮೀಪತಿ ಸಹೋದರರು, ಭದ್ರಗಿರಿ ಕೇಶವದಾಸರು, ನಿರ್ಮಲಾನಂದದಾಸರು, ಭದ್ರಗಿರಿ ಅಶ್ವತ್ಥದಾಸರು, ವಿಮಲಾನಂದದಾಸರು, ನದೀಪುರಂ ಶ್ರೀನಿವಾಸರಂಗಾಚಾರ್ಯರು, ಅರುಣ ಕುಮಾರ ಇವರೂ, ಪಂಢರಿಬಾಯಿ, ರಾಜಮ್ಮ, ಅನಂತಲಕ್ಷ್ಮಿ ಮೊದಲಾದವರೂ ಹರಿಕಥೆಯಲ್ಲಿ ಪ್ರಸಿದ್ಧರು. ಬಿ. ಶಿವಮೂರ್ತಿ ಶಾಸ್ತ್ರಿಗಳು, ರೇವಣ್ಣ, ಬಾಲಭಾರತಿ ಯದುಗಿರಿ ಕುಮಾರಿ-ಮೊದಲಾದವರು ಶಿವ ಕಥೆಯಲ್ಲಿ ಪ್ರಸಿದ್ಧರು. ಬೊಮ್ಮಯ್ಯ ಪೊಮ್ಮಣ್ಣಯ್ಯ ಸಹೋದರರು, ಬೆಳಗಿಲಿಯ ಶಾಂತರಾಜಯ್ಯ ಮೊದಲಾದವರು ಜಿನಕಥೆಯಲ್ಲಿ ಮುಖ್ಯರು.        

   (ಕೆ.ಎಸ್.ಜಿ.ಆರ್.; ಬಿ.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ